ಮಹಮ್ಮದ್ 1 -
	ಬಹಮನಿ ರಾಜ್ಯದ ಎರಡನೆಯ ಸುಲ್ತಾನ (1358-75). ಅಲಾಉದ್ದೀನ್ ಬಹಮನ್ ಷಾನ ಹಿರಿಯ ಮಗ ಮತ್ತು ಉತ್ತರಾಧಿಕಾರಿ. ಬಹಮನೀ ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ದಕ್ಷ ಆಡಳಿತಗಾರ . 1358 ಫೆಬ್ರುವರಿ 11 ರಂದು ಪಟ್ಟಕ್ಕೆ ಬಂದ. ಆ ತರುಣದಲ್ಲಿ ಓರಂಗಲ್ಲಿನ ಕಾಪಯನಾಯಕನನ್ನು ಯುದ್ಧದಲ್ಲಿ ಸೋಲಿಸಿ ಕಪ್ಪ ಮಸೂಲಿ ಮಾಡಿದ. ಅವನ ಸಹಾಯಕ್ಕೆ ಬಂದಿದ್ದ ವಿಜಯನಗರದ 20,000 ಸೈನಿಕರಿಂದ ಕೂಡಿದ್ದ ಪಡೆಯನ್ನು ಹಿಮ್ಮೆಟ್ಟಿಸಿದ. ಆದರೆ ಕಾಪಯನಾಯಕನ ಮಗ ವಿನಾಯಕದೇವ ಇನ್ನೂ ವಿರುದ್ಧನಾಗಿದ್ದುದರಿಂದ ಇನ್ನೊಂದು ಘರ್ಷಣೆಯಲ್ಲಿ ಅವನನ್ನು ಸೆರೆಹಿಡಿದು ಕೊಂದ. 1362-63ರಲ್ಲಿ ದೆಹಲಿಯ ಫಿರೋಜ್‍ನನ್ನು ಬಹಮನೀ ರಾಜ್ಯದ ಮೇಲೆ ದಂಡೆತ್ತಿ ಬರುವಂತೆ ಕಾಪಯ ನಾಯಕ ಸನ್ನಾಹ ನಡೆಸುತ್ತಿದ್ದುದನ್ನು ಅರಿತು ಓರಂಗಲ್ಲಿನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಗೋಲ್ಕಂಡವನ್ನು ತನ್ನ ರಾಜ್ಯಕ್ಕೆ ವಹಿಸಿಕೊಡುವಂತೆ ಮಾಡಿದ. ಈ ಸಂದರ್ಭದಲ್ಲಿ ಕಾಪಯನಾಯಕ ನೀಡಿದ ವೈಢೂರ್ಯಭರಿತ ಸಿಂಹಾಸನ ಮುಂದೆ ಬಹುಮನಿ ಸುಲ್ತಾನರ ರಾಜಸಿಂಹಾಸನವಾಯಿತೆಂದು ಪ್ರಸಿದ್ಧ ಇತಿಹಾಸಕಾರ ಫೆರಿಸ್ತ ತಿಳಿಸುತ್ತಾನೆ. 1366ರಲ್ಲಿ ವಿಜಯನಗರದ ಬುಕ್ಕನನ್ನು ಕೆಣದಿದ. ದಂಡೆತ್ತಿ ಬಂದ ಬುಕ್ಕನ್ನು ವಿಜಯನಗರದವರೆಗೂ ಹಿಮ್ಮೆಟ್ಟಿಸಿ ಸೋಲಿಸಿದ. ಈ ಯುದ್ಧದಿಂದ ಹೆಚ್ಚಿನ ಲಾಭವಾಗಲಿಲ್ಲವಾದರೂ ಸುಲ್ತಾನ ಈ ಮೂಲಕ ಶತ್ರುಗಳಿಗೆ ಬಹಮನೀ ರಾಜ್ಯದ ಪ್ರತಾಪ ತೋರಿಸಿಕೊಟ್ಟ. ದಖನ್ನಿನಲ್ಲಿ ಪ್ರಥಮತಃ ಮದ್ದು ಗುಂಡಿನ ಉಪಯೋಗ ಬಂದಿದ್ದು ಈತನ ಕಾಲದಲ್ಲಿ. ಈ ಹೊಸ ಧಕ್ತಿ ಬಹಮನೀ ರಾಜ್ಯದ ನವಶಕ್ತಿಗೂ ಬಲುಮಟ್ಟಿಗೆ ಕಾರಣವಾಯಿತು.

	ಈತನ ಮಾವ ಸೈಫುದ್ದೀನ್ ಘೋರಿಯನ್ನು ರಾಜ್ಯದ ಪ್ರಧಾನಿಯಾಗಿ (ವಕೀಲ್) ನೇಮಿಸಿದ. ಬಲು ಸಮರ್ಥನಾದ ಅವನ ಸಹಾಯದಿಂದ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದ. ರಾಜ್ಯವನ್ನು ದೌಲತಾಬಾದ್, ಬೀರಾರ್, ಬಿದರೆ, ಗುಲ್ಬರ್ಗ ಎಂಬ ನಾಲ್ಕು ಪ್ರಾಂತ್ಯಗಳಾಗಿ (ಅ-ಶ್ರಾಪ್) ವಿಂಗಡಿಸಿ ಅವುಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿದ. ರಾಜ್ಯದಲ್ಲಿದ್ದ ಕಳ್ಳರು, ದರೋಡೆಕಾರರ ಹಾವಳಿ ಹತ್ತಿಕ್ಕಿದ. ಇವನು ಸಾಯುವ ವೇಳೆಗೆ (1375 ಏಪ್ರಿಲ್ 21) ರಾಜ್ಯದಲ್ಲಿ ಶಾಂತಿ ನೆಲೆಸಿತ್ತು.

ಈತನ ಕಾಲದಲ್ಲಿ ಗುಲ್ಬರ್ಗ ದಖನೀ ಸಂಸ್ಕøತಿಯ ಬೀಡಾಯಿತು. ಆ ನಗರದಲ್ಲಿ ಭವ್ಯಸೌಧಗಳು ನಿರ್ಮಾಣವಾದುವು. ಅಲ್ಲಿಯ ಪ್ರಸಿದ್ಧ ಜಾಮಿ ಮಸೀದಿ ನಿರ್ಮಾಣವಾದದ್ದು ಈತನ ಕಾಲದಲ್ಲಿ.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ